ಬೇಸಿಗೆಯ ಸುಡುವ ಬಿಸಿಲು ಮತ್ತು ಬಿಸಿಲಿನ ವಾತಾವರಣದಲ್ಲಿ, ದೇಹಕ್ಕೆ ತಂಪು ಮತ್ತು ತಾಜಾತನವನ್ನು ನೀಡುವ ಹಣ್ಣುಗಳಲ್ಲಿ, ಬಹಳ ಜನಪ್ರಿಯವಾದ ಹಣ್ಣು ಕರಬೂಜ. ಈ ಹಣ್ಣು ಮಸ್ಕ್ ಮೆಲನ್, ಶಮಾಮ್, ಕರಬೂಜ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಇದು ಸಿಹಿ ರುಚಿ, ನೀರಿನ ಅಂಶದಿಂದ ಸಮೃದ್ಧವಾಗಿದ್ದು ದೇಹಕ್ಕೆ ಉಲ್ಲಾಸವನ್ನು ಕೊಡುವುದಲ್ಲದೆ ಶಾಖದಿಂದ ಪರಿಹಾರ ನೀಡಿ ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಕರಬೂಜ ಹಣ್ಣಿನಲ್ಲಿ ಸುಮಾರು 90% ನೀರು ಇದ್ದು, ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ದಿನದ ಗದ್ದಲ ಮತ್ತು ಬಿಸಿಲಿನ ನಂತರ ಕರಬೂಜ ತಿನ್ನುವುದು ದೇಹವನ್ನು ತಂಪಾಗಿಸುತ್ತದೆ.
ಕರ್ಬೂಜ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ಸಿಪ್ಪೆಯ ಜೊತೆಯಲ್ಲಿ ಅದರ ಬೀಜವನ್ನು ಎಸೆದುಬಿಡುತ್ತೇವೆ. ಈ ರೀತಿ ಮಾಡುವುದರಿಂದ ನಮಗೆ ತಿಳಿಯದಂತೆ ನಮ್ಮ ದೇಹಕ್ಕೆ ಸೇರಬೇಕಿದ್ದ ಉತ್ತಮ ಪೋಷಕಾಂಶವನ್ನು ಕಳೆದುಕೊಳ್ಳುತ್ತೇವೆ.
ಖರ್ಬೂಜದ ಬೀಜಗಳು ವಿಟಮಿನ್ ಎ. ಕೆ ,ಸಿ , ಬಿ1, ಇ ಹಾಗೂ ಸತು, ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಹೇರಳವಾಗಿ ಹೊಂದಿರುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರ್ಬೂಜದ ಬೀಜಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಕರ್ಬೂಜದ ಬೀಜಗಳ ಪ್ರಯೋಜನಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸೇವಿಸುವ ಆಹಾರದಲ್ಲಿ ಕರ್ಬೂಜಬೀಜದ ಸತ್ವವಿರಲಿ

ಕರ್ಬೂಜದ ಬೀಜಗಳನ್ನು ಅಡುಗೆಯಲ್ಲಿ ಬಳಕೆ ಮಾಡುವ ಮುನ್ನ ಇದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿದ ಬಳಿಕ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಂಪೂರ್ಣವಾಗಿ ಬೀಜಗಳು ತಿರುಳಿನಿಂದ ಹೊರಬಂದ ಬಳಿಕ ಸಾಮಾನ್ಯ ಶಾಖದಲ್ಲಿ ಅದನ್ನು ಒಣಗಿಸಲು ಬಿಡಿ. ಬೀಜದ ತೇವಾಂಶಗಳೆಲ್ಲ ಮಾಯವಾಗಿ ಅವುಗಳು ಒಣಗಿದ ಬಳಿಕ ಬೀಜಗಳನ್ನು ನೇರವಾಗಿ ಹಾಗೆಯೇ ಸೇವಿಸಬಹುದು. ಇಲ್ಲವಾದಲ್ಲಿ ಸಲಾಡ್ಗಳಲ್ಲಿ, ಬ್ರೆಡ್, ಬನ್ ಇಲ್ಲವೇ ಕೇಕ್ಗಳಲ್ಲಿ ಸಿಂಪಡಿಸಿ ಕೂಡ ತಿನ್ನಬಹುದು. ಯಾವುದೇ ಸಿಹಿತಿಂಡಿಗಳು, ಸ್ಮೂದಿಗಳಲ್ಲಿ ಕೂಡ ಕರ್ಬೂಜದ ಬೀಜಗಳನ್ನು ಬಳಕೆ ಮಾಡ ಬಹುದಾಗಿದೆ.
ಸಸ್ಯಾಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಶೇಖರಣೆಯನ್ನು ಹೆಚ್ಚಿಸಿಕೊಳ್ಳಲು ಕರ್ಬೂಜದ ಬೀಜಗಳು ಒಳ್ಳೆಯ ಕೊಡುಗೆ ನೀಡುತ್ತವೆ. ಅಲ್ಲದೇ ಹಾರ್ಮೋನ್ಗಳ ಆರೋಗ್ಯಕ್ಕೆ ಕೂಡ ಸಹಾಯ ಮಾಡುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಕೂಡ ಈ ಬೀಜಗಳಿಗೆ ಇದೆ. ಈ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

1) ತೂಕ ಇಳಿಸುವ ಯೋಚನೆಯಲ್ಲಿದ್ದರೆ ಕರ್ಬೂಜ ಹಣ್ಣಿನ ಬೀಜಗಳನ್ನು ಸೇವಿಸಬೇಕು. ಈ ಬೀಜಗಳು ಫೈಬರ್ ಅಂಶದಲ್ಲಿ ಸಮೃದ್ಧವಾಗಿವೆ, ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿ.
2) ಕರ್ಬೂಜ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಮೆದುಳಿನಲ್ಲಿ ಉತ್ತಮ ರಕ್ತ ಪರಿಚಲನೆ ಉಂಟಾಗುತ್ತದೆ, ಇದರಿಂದ ಮನಸ್ಸು ಶಾಂತವಾಗಿರುತ್ತದೆ
3) ಕರಬೂಜ ಹಣ್ಣು ಬೀಟಾ ಕ್ಯಾರೋಟಿನ್ ಅಂಶ ಹೊಂದಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೃಷ್ಟಿಗೆ ಹೊಳಪು ನೀಡುವುದಲ್ಲದೇ ಕಣ್ಣಿನ ಪೊರೆಯನ್ನು ತಡೆಯುತ್ತದೆ.
4) ಕರಬೂಜವು ಹೆಚ್ಚಿನ ಶೇಕಡಾವಾರು ನೀರನ್ನು ಹೊಂದಿರುತ್ತದೆ, ಇದು ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ ಸೇರಿದಂತೆ ಎಲ್ಲಾ ರೀತಿಯ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.
5) ಬಿ ಜೀವಸತ್ವಗಳು, ವಿಶೇಷವಾಗಿ ಬಿ6, ನರಮಂಡಲವನ್ನು ಬೆಂಬಲಿಸುತ್ತವೆ ಮತ್ತು ಮೆದುಳಿಗೆ “ಹಿತವಾದ ಭಾವನೆ” ನೀಡುವ ರಾಸಾಯನಿಕವಾದ ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
6) ಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬುಜ ಹಣ್ಣು ಒಂದು ಒಳ್ಳೆಯ ಔಷಧಿಯಾಗಿದೆ.
7) ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕರ್ಬೂಜ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.
8) ಕರ್ಬೂಜಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯ ಮಾಡುತ್ತವೆ.
9) ಕರ್ಬೂಜದ ಬೀಜಗಳು ಉತ್ತಮ ಪೋಷಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವುದರಿಂದ ಸೂಪರ್ ಫುಡ್ ಎಂದೇ ಕರೆಯಬಹುದಾಗಿದೆ.
10) ಕರಬೂಜ ಬೀಜಗಳಲ್ಲಿ ಮೈಗ್ರೇನ್, ನಿದ್ರಾಹೀನತೆ, ಖಿನ್ನತೆಯ ಅಸ್ವಸ್ಥತೆ ಮುಂತಾದ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
11) ಕರಬೂಜದ ಜ್ಯೂಸ್ ಕುಡಿಯುತ್ತಿದ್ದರೆ ಕಜ್ಜಿ, ಗಜಕರ್ಣದಂತಹ ಚರ್ಮರೋಗ ವಾಸಿಯಾಗುತ್ತದೆ
12) ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಹಣ್ಣು ಸೇವನೆ ಮಾಡಿದರೆ ಪರಿಹಾರ ಕಾಣಬಹುದು.
13) ಇದರಲ್ಲಿರುವ ವಿಟಮಿನ್ ಬಿ ಅಂಶ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ. ಶ್ಯಾಂಪೂ ಹಾಕಿ ಕೂದಲು ತೊಳೆದು ಕರಬೂಜ ಹಣ್ಣಿನ ತಿರುಳಿನಿಂದ ಮಸಾಜ್ ಮಾಡಿ, 10 ನಿಮಿಷದ ಬಳಿಕ ತೊಳೆಯಬೇಕು.
14) ಈ ಹಣ್ಣಿನಲ್ಲಿ ವಿಟಮಿನ್ ಸಿ ಚರ್ಮ ಸುಕ್ಕಾಗದಂತೆ ತಡೆಯುತ್ತದೆ. ಅಕಾಲ ಮುಪ್ಪನ್ನು ತಡೆಯುತ್ತದೆ.
15) ಕರಬೂಜ ಹಣ್ಣು ಸೌಂದರ್ಯವರ್ಧಕವೂ ಆಗಿದೆ. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಚರ್ಮ ಕಾಂತಿಯುಕ್ತಯಾಗುತ್ತದೆ.
ಯಾರೆಲ್ಲ ಸೇವಿಸಬಾರದು

1) ಅಲರ್ಜಿ ಅಥವಾ ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರು ಕರಬೂಜ ಹಣ್ಣನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕೆಲವರಿಗೆ ಈ ಹಣ್ಣನ್ನು ಸೇವಿಸಿದ ತಕ್ಷಣ ದದ್ದುಗಳು, ತುರಿಕೆ, ಊತ ಉಂಟಾಗುತ್ತದೆ. ಹಾಗಾಗಿ ಅಂತವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಹಣ್ಣಿನ ಸೇವನೆ ಮಾಡುವುದು ಬಹಳ ಉತ್ತಮ.
2) ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಕರಬೂಜ ಹಣ್ಣನ್ನು ಹೆಚ್ಚು ತಿನ್ನಬಾರದು. ತಜ್ಞರ ಪ್ರಕಾರ, ಈ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು 60- 80 ರ ನಡುವೆ ಇರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ಆದ್ದರಿಂದ ಮಧುಮೇಹ ಹೊಂದಿರುವವರು ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಸೌಮ್ಯಸನತ್








