ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ ಶೇ.13ರಷ್ಟು ಕುಸಿತ ಕಂಡಿದೆ. ಯುದ್ಧದ ಹಿನ್ನೆಲೆ ಪೂರೈಕೆಯಲ್ಲಿ ಉಂಟಾದ ಅಡಚಣೆಗಳು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಪೆಟ್ರೋಲಿಯಂ ಪ್ಲಾನಿಂಗ್ ಆಂಡ್ ಅನಾಲಿಸಿಸ್ ಸೆಲ್ (PPAC) ದತ್ತಾಂಶಗಳ ಪ್ರಕಾರ, ಕಳೆದ ವರ್ಷ ಮಾರ್ಚ್‌ನಲ್ಲಿ 2.729 ದಶಲಕ್ಷ ಟನ್ ಎಲ್‌ಪಿಜಿ ಬಳಕೆಯಾಗಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅದು 2.379 ದಶಲಕ್ಷ ಟನ್‌ಗೆ ಇಳಿಕೆಯಾಗಿದೆ.
ಭಾರತ ತನ್ನ ಒಟ್ಟು ಎಲ್‌ಪಿಜಿ ಬೇಡಿಕೆಯ ಸುಮಾರು ಶೇ.60ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೂರೈಕೆ ಬಹುಪಾಲು ಹಾರ್ಮುಜ್ ಜಲಸಂಧಿ ಮೂಲಕ ಆಗುತ್ತದೆ. ಆದರೆ ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗಿ, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಈ ಎಲ್‌ಪಿಜಿ ಅಭಾವದ ಪರಿಣಾಮ ಗೃಹೇತರ ಬಳಕೆದಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ವಾಣಿಜ್ಯ ಬಳಕೆದಾರರಿಗೆ ಎಲ್‌ಪಿಜಿ ಮಾರಾಟವು ಸುಮಾರು ಶೇ.48ರಷ್ಟು ಕುಸಿತ ಕಂಡಿದ್ದು, ಬೃಹತ್ ಬಳಕೆ ವಿಭಾಗದಲ್ಲಿ ಶೇ.75.5ರಷ್ಟು ಇಳಿಕೆ ದಾಖಲಾಗಿದೆ.








