- ಲೋಕಾಯುಕ್ತ ತನಿಖೆಯಲ್ಲಿ ಆತಂಕಕಾರಿ ಮಾಹಿತಿ
ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯ ಆರ್‌ಸಿಎಚ್ ಪೋರ್ಟಲ್ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಒಟ್ಟು 1,354 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ.
ಈ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳು ಕೇವಲ 674 ಮಾತ್ರವಾಗಿದ್ದು, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಬಾಲ್ಯ ವಿವಾಹ, ಪ್ರೀತಿ ಸಂಬಂಧಗಳು ಮತ್ತು ಲೈಂಗಿಕ ದೌರ್ಜನ್ಯಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾಗುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.
ಇತ್ತೀಚೆಗೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ, ನಿಯಮಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಅಕ್ರಮ ಸ್ಕ್ಯಾನಿಂಗ್ ದಂಧೆ ನಡೆಯುತ್ತಿರುವುದು ಬಹಿರಂಗವಾಗಿದೆ.
ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಂದ ಮಂಡ್ಯ ಜಿಲ್ಲೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣಗಳ ತನಿಖೆಯಲ್ಲಿ ಮೈಸೂರು ವರೆಗೆ ವ್ಯಾಪಿಸಿರುವ ಜಾಲವನ್ನು ಪತ್ತೆಹಚ್ಚಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿತ್ತು.ಇದನ್ನು ಓದಿ –ಗೋಡೆ ಕೊರೆದು ಚಿನ್ನದಂಗಡಿಯಲ್ಲಿ 70 ಕೆಜಿ ಬೆಳ್ಳಿ ಕಳವು
ಇದೀಗ ಬಾಲಗರ್ಭಿಣಿಯರ ಪ್ರಕರಣಗಳ ಏರಿಕೆ ಜಿಲ್ಲೆಯಲ್ಲಿ ಮತ್ತೆ ಗಂಭೀರ ಪರಿಸ್ಥಿತಿಯನ್ನು ತೋರಿಸುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.








