ಬೆಂಗಳೂರು: ನಗರದಲ್ಲಿ ನಂಬರ್ ಪ್ಲೇಟ್ (Number Plate) ಇಲ್ಲದ ವಾಹನಗಳನ್ನು ರಸ್ತೆಗಿಳಿಸಿದರೆ ವಂಚನೆ (ಸೆಕ್ಷನ್ 420) ಪ್ರಕರಣ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ, ನಂಬರ್ ಪ್ಲೇಟ್ ಇಲ್ಲದ ಅಥವಾ ವಿಕಾರಗೊಂಡ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳಲು ನಂಬರ್ ಪ್ಲೇಟ್ ಹಾಕದೇ ವಾಹನ ಓಡಿಸುತ್ತಿದ್ದಾರೆ. ಅಂತಹವರನ್ನು ನಿಯಂತ್ರಿಸಲು ಪೊಲೀಸರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪಶ್ಚಿಮ ವಿಭಾಗದಲ್ಲೇ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಗರದಾದ್ಯಂತ ನೂರಕ್ಕೂ ಅಧಿಕ ವಾಹನ ಸವಾರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಒಂದು ರಾತ್ರಿ ಮಾತ್ರದಲ್ಲೇ ಸುಮಾರು 1000ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಕೆಲವರು ಸಮರ್ಪಕ ಕಾರಣಗಳನ್ನು ನೀಡಿದ ಹಿನ್ನೆಲೆಯಲ್ಲಿ ತಮ್ಮ ವಾಹನಗಳನ್ನು ಬಿಡಿಸಿಕೊಂಡು ಹೋಗಲು ಅವಕಾಶ ದೊರೆತಿದ್ದರೆ, ಸಮರ್ಪಕ ಕಾರಣ ನೀಡದೆ ಹೋದವರ ವಿರುದ್ಧ ನೇರವಾಗಿ ವಂಚನೆ ಕೇಸ್ ದಾಖಲಿಸಲಾಗಿದೆ.
ಇನ್ನು ಪ್ರಕರಣ ದಾಖಲಾದವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತಿದ್ದು, ತಮ್ಮ ವಾಹನಗಳನ್ನು ಮರಳಿ ಪಡೆಯಲು ವಾಹನ ಸವಾರರು ಕೋರ್ಟ್ ಮುಖಾಂತರವೇ ಕ್ರಮ ಕೈಗೊಳ್ಳಬೇಕಾಗಿದೆ.
ಪೊಲೀಸರ ಈ ನಿರ್ಧಾರದಿಂದಾಗಿ ನಂಬರ್ ಪ್ಲೇಟ್ ಇಲ್ಲದೇ ಅಥವಾ ಅಸ್ಪಷ್ಟ ಪ್ಲೇಟ್ ಹೊಂದಿರುವ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಅಪರಾಧ ಚಟುವಟಿಕೆಗಳಿಗೂ ತಡೆ ಬೀಳಲಿದೆ ಮತ್ತು ಸಂಚಾರಿ ನಿಯಮ ಉಲ್ಲಂಘನೆಗೂ ಕಡಿವಾಣ ಬೀಳುವ ನಿರೀಕ್ಷೆಯಿದೆ.








