ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ವ್ಯಾಪಕ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ. ಯೋಜನೆಯ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿ ಅನರ್ಹರನ್ನು ಗುರುತಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅವರ ಖಾತೆಗಳಿಗೆ ಹಣ ವರ್ಗಾವಣೆಯನ್ನು ಸ್ಥಗಿತಗೊಳಿಸಿದೆ. ಇಲಾಖೆಯ ಮಾಹಿತಿ ಪ್ರಕಾರ, ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ 1.94 ಲಕ್ಷ ಮಂದಿಯನ್ನು ಯೋಜನೆಯಿಂದ ಕೈಬಿಡಲಾಗಿದೆ.
ಇದಲ್ಲದೆ, ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿದ್ದ ಖಾತೆಗಳಿಗೆ ಸಹ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಅಂತಹ ಖಾತೆಗಳಿಗೂ ಹಣ ವರ್ಗಾವಣೆ ನಿಲ್ಲಿಸಲಾಗಿದೆ.
ಜಿಲ್ಲಾವಾರು ಪರಿಶೀಲನೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, 47,871 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ಬಳಿಕ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳು ಹೆಚ್ಚಿನ ಸಂಖ್ಯೆಯ ಅನರ್ಹ ಫಲಾನುಭವಿಗಳನ್ನು ಹೊಂದಿರುವ ಜಿಲ್ಲೆಗಳಾಗಿ ಗುರುತಿಸಿಕೊಂಡಿವೆ.
ಮಾರ್ಚ್ ತಿಂಗಳಲ್ಲೇ ಈ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿವಿಧ ಸರ್ಕಾರಿ ದತ್ತಾಂಶಗಳ ಹೊಂದಾಣಿಕೆ ಮೂಲಕ ಅನರ್ಹರನ್ನು ಪತ್ತೆಹಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.ಇದನ್ನು ಓದಿ –ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು
ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ನಕಲಿ ಹಾಗೂ ಅನರ್ಹ ಫಲಾನುಭವಿಗಳಿಗೆ ಹಣ ಪಾವತಿಯಾಗುವುದನ್ನು ತಡೆಯಲು ಸಾಧ್ಯವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ.








