ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಿಲ್ಲಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾವಣಗೆರೆ, ಮಂಡ್ಯ, ಮೈಸೂರು, ಧಾರವಾಡ ಸೇರಿ ಹಲವು ಕಡೆ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ಬೆಳಗಿನ ಜಾವಲೇ ಆರಂಭವಾದ ಈ ದಾಳಿಯಿಂದ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. ಲೋಕಾಯುಕ್ತ ಪೊಲೀಸರು ದಾಖಲೆಗಳು, ದಾಖಲಾಗದ ಆಸ್ತಿ ವಿವರಗಳು ಹಾಗೂ ಅನುಮಾನಾಸ್ಪದ ಹಣಕಾಸು ಲೆಕ್ಕಪತ್ರಗಳನ್ನು ಪರಿಶೀಲಿಸುವಲ್ಲಿ ತೊಡಗಿದ್ದಾರೆ.
ಮಂಡ್ಯದಲ್ಲಿ ದಾಳಿ:
ಮಂಡ್ಯ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಪುಟ್ಟಸ್ವಾಮಿ ಅವರ ಮನೆಯಲ್ಲಿ ದಾಳಿ ನಡೆದಿದೆ. ಜೊತೆಗೆ ಅವರ ತೊರೆಚನಹಳ್ಳಿಯ ನಿವಾಸ, ಆಲೆಮನೆ ಮತ್ತು ಮೈಸೂರಿನ ಅಧಿಕೃತ ನಿವಾಸಗಳ ಮೇಲೂ ಹುಡುಕಾಟ ನಡೆದಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಧಾರವಾಡದಲ್ಲಿ ತಪಾಸಣೆ:
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಭಾಶ್ಚಂದ್ರ ನಾಟೀಕರ್ ಅವರ ಮನೆಯಲ್ಲಿ ಕೂಡ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಯಾಲಕ್ಕಿ ಶೆಟರ್ ಬಡಾವಣೆಯಲ್ಲಿರುವ ಅವರ ವಾಸಸ್ಥಳಕ್ಕೆ ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ತಂಡ ಧಾವಿಸಿದೆ.
ದಾವಣಗೆರೆಯಲ್ಲಿ ದಾಳಿ:
ದಾವಣಗೆರೆಯಲ್ಲಿ ಎಪಿಎಂಸಿ ಕೃಷಿ ಮಾರಾಟ ವಿಭಾಗದ ಸಹಾಯಕ ನಿರ್ದೇಶಕ ಜೆ. ಪ್ರಭು ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲು ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ರಾಜ್ಯದಾದ್ಯಂತ ನಡೆದ ಈ ದಾಳಿಗಳು ಮುಂದುವರಿಯುವ ಸಾಧ್ಯತೆ ಇದ್ದು, ಇನ್ನಷ್ಟು ಅಧಿಕಾರಿಗಳ ಹೆಸರುಗಳು ಹೊರಬರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.








