ನಾವು ಯಾವುದನ್ನು ಮರೆಯಬಾರದು ಅಂದುಕೊಂಡಿರುತ್ತೇವೆಯೋ ಅದನ್ನು ಬೇಗ ಮರೆತು ಬಿಡುತ್ತೇವೆ. ಆದರೆ ಮರೆಯಬೇಕಾದದ್ದನ್ನು ಎಷ್ಟೇ ಪ್ರಯತ್ನ ಮಾಡಿದರೂ ಮರೆಯಲು ಆಗುವುದಿಲ್ಲ. ಕೆಟ್ಟ ನೆನಪುಗಳು ಮೇಲಿಂದ ಮೇಲೆ ನೆನಪಿಗೆ ಬಂದು ಮನಸ್ಸನ್ನು ಹಿಂಡುತ್ತದೆ. ಸಾಮಾನ್ಯವಾಗಿ ಇದು ಎಲ್ಲರ ಜೀವನದಲ್ಲಿ ಜರಗುವ ಸಾಮಾನ್ಯ ಕ್ರಿಯೆಯಾದರೂ, ಕೆಲವರು ಅದರಿಂದ ಸಾಧ್ಯವಿದ್ದಷ್ಟು ಹೊರಗೆ ಬಂದು ಸಾಮಾನ್ಯ ಜೀವನ ನಡೆಸುತ್ತಾರೆ. ಕೆಲವೊಂದಿಷ್ಟು ಜನರು ಕೆಟ್ಟ ಘಟನೆಗಳಿಂದ ಹೊರಗೆ ಬರದೆ ಒದ್ದಾಡುತ್ತಾರೆ. ಒತ್ತಾಯಪೂರ್ವಕವಾಗಿ ಮರೆಯಲು ಚಟದ ದಾಸರಾಗಲೂಬಹುದು.
ಪ್ರೀತಿಸಿ ಕೈಕೊಟ್ಟ ಪ್ರಿಯತಮೆ, ಅಥವಾ ಪ್ರಿಯತಮನ ನೆನಪು ಪದೇ ಪದೇ ಕಾಡುವುದು ಸಹಜ. ಅವಳು ಸಿಗದಿದ್ದರೆ ಜೀವನವೇ ಮುಗಿದು ಹೋಯಿತೆನ್ನುವಂತೆ ವರ್ತಿಸುತ್ತಾನೆ. ಅವಳೂ ಹಾಗೆಯೇ ಅವನಿಲ್ಲದ ಜೀವನ ನೆನಸಿಕೊಳ್ಳಲು ಆಗುವುದಿಲ್ಲ ಎಂದು ಚಡಪಡಿಸುತ್ತಾಳೆ. ಒಂಟಿತನದಿಂದ ಬಳಲುತ್ತಾರೆ. ಡಿಪ್ರೆಶನ್ ಗೂ ಹೋಗಬಹುದು. ನಿಜವಾಗಿ ಪ್ರೀತಿಯೆಂದರೆ ಭರವಸೆ, ವಿಶ್ವಾಸವಲ್ಲವೇ!! ಪರಿಶುದ್ಧವಾದ ಪ್ರೀತಿ ಮುರಿದು ಬೀಳಲು ಸಾಧ್ಯವಿಲ್ಲ.
ಒಂದು ವೇಳೆ ಮುರಿದು ಬಿದ್ದಿದ್ದರೆ ಅದು ಪ್ರೀತಿಯಲ್ಲ ಎಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಸ್ವಲ್ಪ ತಾಳ್ಮೆಯಿಂದ ಕಾಯ್ದರೆ ಮುಂದೊಂದು ದಿನ ನಿಮ್ಮನ್ನು ಪರಿಶುದ್ಧವಾಗಿ ಪ್ರೀತಿಸುವವರು ಸಿಗಬಹುದು. ಒಂದಿಷ್ಟು ದಿನಗಳವರೆಗೆ ಕಾಯಬೇಕು. ಇನ್ನೊಂದಿಷ್ಟು ಜನ ಇರುತ್ತಾರೆ ಯಾರನ್ನು ಪ್ರೀತಿಸಿ ಇನ್ಯಾರನ್ನೊ ಮದುವೆಯಾಗುತ್ತಾರೆ. ಹಳೆಯ ಪ್ರೀಮಿಯನ್ನು ಹೃದಯದಲ್ಲಿಟ್ಟುಕೊಂಡು ಮದುವೆಯಾದವರಿಗೆ ಮೋಸ ಮಾಡುತ್ತಾ ತನಗೂ ಮೋಸ ಮಾಡಿಕೊಳ್ಳುತ್ತಾ ಜೀವನ ನರಕ ಮಾಡಿಕೊಂಡಿರುತ್ತಾರೆ. ಹಳೆಯದನ್ನು ಮರೆಯದೇ ಹೊಸ ಸಂಬಂಧಕ್ಕೆ ಹೊಂದಿಕೊಳ್ಳದೇ ಒದ್ದಾಡುತ್ತಾರೆ. ಸರಿಯಾಗಿ ವಾಸ್ತವಿಕ ನೆಲೆಯಲ್ಲಿ ಯೋಚಿಸಿ,ಹಳೆಯದನ್ನು ಮರೆತು ಹೊಸದಕ್ಕೆ ಹೊಂದಿಕೊಂಡು ಇರುವ ಅಲ್ಪ ಆಯುಷ್ಯವನ್ನು ಸಾರ್ಥಕತೆ ಮಾಡಿಕೊಂಡರಾಯಿತು.
ಸಂಬಂಧಿಕರಲ್ಲಿ ಯಾರೊ ನಿಮ್ಮನ್ನು ಅವಮಾನಿಸಿದ ಘಟನೆ ನಿಮ್ಮ ಮನಸ್ಸುನ್ನು ಕದಲುತ್ತಿರುತ್ತದೆ. ಬಿಟ್ಟೇನು ಎಂದರೆ ಬಿಡದೆನೊ ಮಾಯೆ ಎನ್ನುವಂತೆ ನೆನಪುಗಳು ಮರಳಿ ಮರಳಿ ಮುನ್ನೆಲೆಗೆ ಬಂದು ಮನಸ್ಸನ್ನು ಹಿಂಡುತ್ತವೆ. ಅವರ ಮೇಲೆ ದ್ವೇಷ ಸಾಧಿಸಲು ನಾವು ತುದಿಗಾಲ ಮೇಲೆ ನಿಂತಿರುತ್ತೇವೆ. ಇದರಿಂದ ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ ವಿನಃ ಮತ್ತೇನಾಗುವುದಿಲ್ಲ. ಅದಕ್ಕಿಂತಲೂ ಆ ಘಟನೆಯನ್ನು ಮರೆತುಬಿಟ್ಟರೆ ಹೇಗೆ!!. ನಿಮ್ಮ ಜೀವನದಲ್ಲಿ ಯಾವಾಗಲೂ ಒಂದು ಸಲ ಯಾರೊ ಮೋಸ ಮಾಡಿದ್ದನ್ನು ನೆನಪಿಸಿಕೊಂಡು ಕೊರಗುವುದು ಎಷ್ಟು ಸರಿ!! ಅದನ್ನು ಆದಷ್ಟು ಬೇಗನೆ ಮರೆಯುವುದು ಒಳ್ಳೆಯದಲ್ಲವೇ.
ಬಿಟ್ಟಿರಲಾರದ ಸಂಬಂಧಗಳು ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಮುರಿದುಬಿದ್ದಿರುತ್ತದೆ. ನೀವು ಎಷ್ಟೇ ಪ್ರಯತ್ನ ಪಟ್ಟರು ರಿಪೇರಿ ಮಾಡಲಾಗದಷ್ಟು ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ನೀವು ರಾಜಿಯಾಗಲು, ಕ್ಷಮೆ ಕೇಳಲು ಮಾನಸಿಕವಾಗಿ ಸಿದ್ಧರಿದ್ದರೂ ಸಹ ಅವರು ನಿಮ್ಮ ಸಂಬಂಧವೇ ಬೇಡ ಎನ್ನುವ ಪರಿಸ್ಥಿತಿ ಇದ್ದರೆ ಆ ಸಂಬಂಧಕ್ಕೆ ಅನಿವಾರ್ಯ ಎಳ್ಳುನೀರು ಬಿಟ್ಟು ಅದು ಮತ್ತೆ ಮತ್ತೆ ನೆನಪಾಗದಂತೆ ನೋಡಿಕೊಳ್ಳಬೇಕು.
ನಿಮ್ಮ ಆತ್ಮೀಯ ಗೆಳೆಯ ಅಥವಾ ಗೆಳತಿ ನಿಮ್ಮಿಂದ ಕಾರಣವಿಲ್ಲದೇ ದೂರವಾದರೆಂದರೆ ನಮ್ಮ ಅವಶ್ಯಕತೆ ಅವರಿಗಿಲ್ಲದಿರಬಹುದು. ಅಥವಾ ನಮ್ಮ ಯಾವುದೊ ಒಂದು ಗುಣ ಅವರಿಗೆ ಸರಿವೆನಸದಿರಬಹುದು. ನಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿ ಗೆಳೆತನ ಉಳಿಸಿಕೊಳ್ಳೋಣ. ನಮ್ಮಿಂದ ತಪ್ಪು ಇಲ್ಲದೇ ಇದ್ದರೆ ಉದ್ದೇಶಪೂರ್ವಕವಾಗಿ ನಮ್ಮ ಗೆಳೆತನ ರಿಜೆಕ್ಟ್ ಮಾಡಿದರೆ ಅವರ ಬಗ್ಗೆ ಬಹಳ ಯೋಚಿಸದೆ ಮುಂದೆ ಸಾಗಿದರಾಯಿತು. ಜೀವನ ನಿಲ್ಲುವ ನಿಲ್ದಾಣವಲ್ಲ, ನಿರಂತರವಾಗಿ ಸಾಗುವ ಪಯಣ. ಆಕಸ್ಮಾತ್ತಾಗಿ ಆತ್ಮೀಯರೊಬ್ಬರು ಬಾರದ ಲೋಕಕ್ಕೆ ಹೋದ ನೆನಪಂತೂ ಎಂತಹ ಕಲ್ಲೆದೆಯವರನ್ನು ಕರಗಿಸಿ ಬಿಡುತ್ತೆ. ಆದರೆ ಮೇಲಿಂದ ಮೇಲೆ ನೆನಪು ಮಾಡಿಕೊಂಡರೂ ಅದರಿಂದ ಪ್ರಯೋಜನವಿಲ್ಲ ಎಂಬುದನ್ನು ತಿಳಿಯಬೇಕು. ಜೊತೆಗೆ ಬಾರದ ಲೋಕಕ್ಕೆ ಹೋದವರು ಮರಳಿ ಬರುವುದಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಬೇಕು.
ನಮ್ಮ ಜೀವನ ಒಳ್ಳೆಯದು ಮತ್ತು ಕೆಟ್ಟದರ ಮೊತ್ತವಾಗಿರುತ್ತದೆ. ಒಳ್ಳೆಯ ಘಟನೆಗಳನ್ನು ನೆನಪಿಸಿಕೊಂಡು ಕಷ್ಟಕರವಾದ ಕೆಟ್ಟ ಘಟನೆಗಳನ್ನು ಮರೆಯಲೇಬೇಕು. ಆದರೆ ಅದು ಅಷ್ಟು ಸುಲಭವಲ್ಲ.
ನಾವು ಯಾವಾಗಲೂ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರಬೇಕು. ಅಂದರೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದಿನವಿಡೀ ಬ್ಯುಸಿಯಾಗಿದ್ದರೆ ಕೆಟ್ಟ ಘಟನೆಗಳನ್ನು ಮರೆಯಬಹುದು. ಅನುಕೂಲ ಇದ್ದರೆ ಪ್ರವಾಸ ಮಾಡುವ ಯೋಜನೆ ಹಾಕಿಕೊಳ್ಳಬೇಕು. ಇದರಿಂದ ಸ್ಥಳ ಬದಲಾವಣೆ ಹಾಗೂ ಹೊಸ ಪರಿಸರದಿಂದ ಮನಸ್ಸು ಉಲ್ಲಾಸಭರಿತವಾಗಿ ಹಳೆಯದನ್ನು ಮರೆಯಲು ಸಾಧ್ಯವಾಗುತ್ತದೆ.
“ನೀನು ನಕ್ಕರೆ ಜಗವೇ ನಗುವುದು, ನೀನು ಅತ್ತರೆ ಒಂಟಿಯಾಗಿ ಅಳಬೇಕು” ಎಂಬ ವಾಕ್ಯದಂತೆ ಕೆಟ್ಟ ಘಟನೆಯ ನೆನಪುಗಳನ್ನು ನೆನೆಸಿಕೊಂಡು ಗೋಳಾಡಿ ಅತ್ತರೂ ಪ್ರತಿದಿನ ನಿಮ್ಮನ್ನು ಸಂತೈಸಲು ಯಾರೂ ಬರುವುದಿಲ್ಲ. ಭಾವನಾತ್ಮಕವಾದ ನೋವುಗಳನ್ನು ಅನುಭವಿಸದೇ ಹಳೆಯದನ್ನು ಮರೆತು ಮುಂದೆ ನಡೆದು ಬಿಟ್ಟರಾಯಿತು. ನಕಾರಾತ್ಮಕ ನೆನಪುಗಳನ್ನು ಮರೆಯಲು ಮೊದಲು ನಿಮಗೆ ದ್ರೋಹ, ಮೋಸ ಮಾಡಿದವರನ್ನು ಕ್ಷಮಿಸಿಬಿಡಿ. ಕ್ಷಮಿಸುವುದರಿಂದ ನಮ್ಮ ತಲೆಯಿಂದ ಅವರನ್ನು ಹೊರಗೆ ಹಾಕಿದಂತಾಗಿ ಒಂದಿಷ್ಟು ಭಾರ ಕಡಿಮೆಯಾಗುತ್ತದೆ. ಕಳೆದು ಹೋದ ಪ್ರೀತಿಯನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡುವುದನ್ನು ಬಿಟ್ಟು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.
ಮುರಿದು ಹೋದ ಸಂಬಂಧಗಳು ಒಡೆದು ಹೋದ ಕನ್ನಡಿಯಂತೆ ಒತ್ತಾಯಪೂರ್ವಕವಾಗಿ ಜೋಡಿಸಿದರೂ ಅವು ಮೊದಲಿನಂತೆ ಆಗಲೂ ಸಾಧ್ಯವಿಲ್ಲ.

ಬಸವರಾಜ ಹೊನಗೌಡರ








