ಚೆನ್ನೈ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಎಐಎಡಿಎಂಕೆ–ಬಿಜೆಪಿ ಮೈತ್ರಿಯನ್ನು ಟೀಕಿಸುವ ವೇಳೆ ಪ್ರಧಾನಿಯ ವಿರುದ್ಧ ತೀವ್ರ ಪದಪ್ರಯೋಗ ಬಳಸಿದರು. ಇದರಿಂದ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ವಿಚಾರದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಉಲ್ಲೇಖಿಸಿದ ಖರ್ಗೆ, ಬಿಜೆಪಿ ಬೆಂಬಲಿಸಿರುವುದಕ್ಕಾಗಿ ಎಐಎಡಿಎಂಕೆಯನ್ನು ಟೀಕಿಸಿದರು. ತಮಿಳುನಾಡಿನ ಜನರು ಕಾಂಗ್ರೆಸ್‌ಗೆ ನೀಡಿದ ಬೆಂಬಲದ ಹಿನ್ನೆಲೆಯಲ್ಲಿ ಮಸೂದೆಗೆ ವಿರೋಧ ವ್ಯಕ್ತಪಡಿಸಲು ಸಾಧ್ಯವಾಯಿತು ಎಂದರು.
ಪೆರಿಯಾರ್, ಡಾ. ಅಂಬೇಡ್ಕರ್, ಅಣ್ಣಾದೊರೈ, ಕಾಮರಾಜ್ ಮತ್ತು ಕರುಣಾನಿಧಿ ಅವರ ಆದರ್ಶಗಳನ್ನು ಉಲ್ಲೇಖಿಸಿ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಒತ್ತಿಹೇಳಿದರು.
ಆದರೆ, ತಮ್ಮ ಹೇಳಿಕೆ ಕುರಿತು ಉದ್ಭವಿಸಿದ ವಿವಾದಕ್ಕೆ ಬಳಿಕ ಸ್ಪಷ್ಟನೆ ನೀಡಿದ ಖರ್ಗೆ, “ನಾನು ಬಳಸಿದ ಪದಗಳನ್ನು ಶಾಬ್ದಿಕ ಅರ್ಥದಲ್ಲಿ ಹೇಳಿಲ್ಲ. ಪ್ರಧಾನಿ ಮೋದಿ ವಿರೋಧಿಗಳನ್ನು ತನಿಖಾ ಸಂಸ್ಥೆಗಳ ಮೂಲಕ ಭಯಭೀತಗೊಳಿಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದೆ” ಎಂದು ತಿಳಿಸಿದ್ದಾರೆ.ಇದನ್ನು ಓದಿ –ಇಡಿ ದಾಳಿಗೂ ತಂದೆಗು ಸಂಬಂಧವಿಲ್ಲ: ನಲಪಾಡ್
ಇಡಿ, ಸಿಬಿಐ ಮತ್ತು ಐಟಿ ಸಂಸ್ಥೆಗಳ ಬಳಕೆಯ ಬಗ್ಗೆ ಆರೋಪ ವ್ಯಕ್ತಪಡಿಸಿ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.








