ಕೆಲವರು ಕೆಲವೇ ಸೆಕೆಂಡುಗಳಲ್ಲಿ ಬಟ್ಟೆಯನ್ನು ಆರಿಸಿದರೆ ಮತ್ತೆ ಕೆಲವರು ದಿನಗಟ್ಟಲೆ ಆರಿಸುತ್ತಾರೆ ಮತ್ತು ಹಾಗೆ ಆರಿಸಿದ ಬಟ್ಟೆಗಳ ಕುರಿತು ಗೊಂದಲ ಮಾಡಿಕೊಂಡು ಪದೇಪದೇ ಅಂಗಡಿಗೆ ಮರಳಿ ಕೊಟ್ಟು ಅವರ ಬೇಸರಕ್ಕೂ ಕಾರಣವಾಗುತ್ತಾರೆ.
ಮತ್ತೆ ಕೆಲವೊಮ್ಮೆ ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗುವಾಗ ಯಾವ ರೀತಿಯ ದಿರಿಸನ್ನು ಧರಿಸಬೇಕು ಎಂಬ ಯೋಚನೆಯಲ್ಲಿಯೇ ಸಮಯ ಸರಿದು ಹೋಗಿ ಕೊನೆಗೆ ಕೈಗೆ ಸಿಕ್ಕ ಯಾವುದೋ ಒಂದನ್ನು ಧರಿಸಿ ಹೋಗಿ ನಗೆಪಾಟಲಿಗೆ ಈಡಾಗುವ ಪ್ರಸಂಗಗಳು ಕೂಡ ಎಷ್ಟೋ ಜನರ ಬದುಕಿನಲ್ಲಿ ಕಾಣಸಿಗುತ್ತದೆ.
ಕೆಲವರು ಹೋಟೆಲುಗಳಿಗೆ ಹೋದಾಗ ಅಥವಾ ಮನೆಯಲ್ಲಿ ಏನನ್ನು ತಿನ್ನಬೇಕು ಅಥವಾ ತಿಂಡಿಗೆ ಏನು ಬೇಕು ಎಂದು ಹೇಳುವುದರಲ್ಲಿಯೇ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಎಲ್ಲ ತಿಂಡಿಗಳ ಕುರಿತು ಮಾತನಾಡಿ ಕೊನೆಗೆ ನಿನಗೆ ತಿಳಿದದ್ದು ಮಾಡು ಎಂದು ತಮ್ಮ ಸಂಗಾತಿಗೆ ಹೇಳುವರು. ಆ ಮೂಲಕ ಅವರ ಸಂಗಾತಿಯನ್ನು ಅನಿಶ್ಚಿತತೆಯಲ್ಲಿ ಇಟ್ಟು ಅವರು ಕೂಡ ಇದನ್ನು ಮೊದಲೇ ಹೇಳಬಾರದಿತ್ತೇ? ಎಂದು ಮೂದಲಿಸಲು ಕಾರಣರಾಗುತ್ತಾರೆ.
ಮತ್ತೆ ಕೆಲವರು ಬೇಕಿರಲಿ, ಬೇಡದೆ ಇರಲಿ ಅಂಗಡಿಯಲ್ಲಿರುವ ಎಲ್ಲಾ ವಸ್ತುಗಳನ್ನು ತೆಗೆಸಿ ಹಾಕಿ ಕೊನೆಗೆ ಯಾವುದನ್ನೂ ಆರಿಸದೆ ಅಂಗಡಿಯವರ ಕೆಂಗಣ್ಣಿಗೆ ಪಾತ್ರರಾಗುತ್ತಾರೆ. ಮತ್ತೊಂದು ಬಾರಿ ಅಂತಹ ವ್ಯಕ್ತಿಗಳು ತಮ್ಮ ಅಂಗಡಿಗೆ ಬಂದರೆ ಅಂಗಡಿಯವರು ಅತ್ಯಂತ ಸೌಜನ್ಯದಿಂದ ನೀವು ಕೇಳುವ ವಸ್ತುಗಳು ನಮ್ಮಲ್ಲಿ ದೊರೆಯುವುದಿಲ್ಲ ಎಂದು ಹೇಳುವ ಮಟ್ಟಿಗೆ ಅವರ ಆಯ್ಕೆಯ ಶಕ್ತಿ ಕುಂಠಿತಗೊಂಡಿರುತ್ತದೆ.
ಇದೇ ರೀತಿ ಬಹಳಷ್ಟು ಜನ ಎಷ್ಟೋ ವಿಷಯಗಳಲ್ಲಿ ಸ್ಪಷ್ಟ ಹಾಗೂ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಾರೆ. ವಿಪರೀತ ಗೊಂದಲ, ತಮ್ಮ ಆಯ್ಕೆಯ ಕುರಿತು ತಮಗೆ ಸ್ಪಷ್ಟತೆ ಇಲ್ಲದೆ ಇರುವುದು,ಅನಿಶ್ಚಿತ ಮನಸ್ಥಿತಿ ಹೀಗೆ ಹತ್ತು ಹಲವು ಸಮಸ್ಯೆಗಳು ಇದಕ್ಕೆ ಕಾರಣವಿರಬಹುದು.
ಅಂತಹವರು ಇತರರು ಬೇಗನೆ ನಿರ್ಧಾರಗಳನ್ನು ಕೈಗೊಂಡು ಕಾರ್ಯನಿರತರಾಗುವುದನ್ನು ಅಚ್ಚರಿ ಪಡುತ್ತಾರೆ. ತಮಗೂ ಕೂಡ ಆ ರೀತಿಯ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಲ್ಲವಲ್ಲ ಎಂಬ ಬೇಸರ, ನೋವು ಅವರನ್ನು ಸದಾ ಕಾಡುತ್ತದೆ ಅಂತಹವರಿಗೆ ಕೆಳಗಿನ ಉಪಾಯಗಳು ಸಹಾಯಕವಾಗಬಲ್ಲವು.
ಮೊದಲನೆಯದಾಗಿ ವಿಪರೀತ ಆಯ್ಕೆಗೆ ಅವಕಾಶ ಮಾಡಿಕೊಡಬೇಡಿ. ಬಹಳಷ್ಟು ಆಯ್ಕೆಗಳು ಇದ್ದಾಗ ಮನಸ್ಸು ಗೊಂದಲದ ಗೂಡಾಗುತ್ತದೆ. ನೀವು ಇಷ್ಟ ಪಡುವ ಯಾವುದಾದರೂ ಎರಡು ಇಲ್ಲವೇ ಮೂರು ಆಯ್ಕೆಗಳನ್ನು ಮಾತ್ರ ನಿಮ್ಮ ಮುಂದೆ ಇಟ್ಟುಕೊಂಡು ಅದರಲ್ಲಿ ಒಂದು ಇಲ್ಲವೇ ಎರಡನ್ನು ನಿಮ್ಮ ಇಚ್ಛೆಯಂತೆಆಯ್ದುಕೊಳ್ಳಿ.
ನೀವು ಆಯ್ದುಕೊಳ್ಳುವ ವಸ್ತುಗಳನ್ನು ಒಳ್ಳೆಯ ಮತ್ತು ಅಷ್ಟೇನೂ ಒಳ್ಳೆಯದಲ್ಲದ ಎಂಬ ಎರಡು ವಿಭಾಗಗಳಾಗಿಸಿದರೆ ಒಳ್ಳೆಯದು. ಇದು ನಿಮ್ಮ ಗೊಂದಲವನ್ನು ದೂರಗೊಳಿಸುತ್ತದೆ. ಒಳ್ಳೆಯ ಆಯ್ಕೆ ಎಂದರೆ ನಿಮಗೆ ಅದು ನಿಮ್ಮ ಕೈಗೆಟಕುವ ದರದಲ್ಲಿ ಇರುವುದು ಹಾಗೂ ನಿಮ್ಮ ಆಸೆಯನ್ನು ಪೂರೈಸುವ ಅಂಶಗಳನ್ನು ಹೊಂದಿರುವುದು..
ಅಷ್ಟೇನು ಒಳ್ಳೆಯದಲ್ಲದ ಎಂದರೆ ನಿಮ್ಮ ಮಿತಿಗಳನ್ನು ಮೀರಿದ ದುಬಾರಿ ಬೆಲೆಯ ವಸ್ತು ಹಾಗೂ ನಿಮ್ಮನ್ನು ಸಾಲದಲ್ಲಿ ಕೆಡವುವಂತದ್ದು ಎಂದು ಭಾವಿಸಿ.
ಹೀಗೆ ಎರಡು ವಿಭಾಗಗಳಲ್ಲಿ ನೋಡಿದಾಗ ಆಯ್ದುಕೊಳ್ಳುವುದು ಸಲೀಸಾಗುತ್ತದೆ..
ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ ಇಲ್ಲಿ ಆತ್ಮಸಾಕ್ಷಿ ಎಂದರೆ ನಿಮ್ಮ ಬುದ್ಧಿ. ಈ ಹಿಂದಿನ ಅನುಭವಗಳಿಂದ ಅದು ಸಾಕಷ್ಟು ಜಾಣ್ಮೆಯನ್ನು ಹೊಂದಿರುತ್ತದೆ. ನಿಮ್ಮ ಇ೦ದಿನ ಬದುಕಿನ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಇದು ಸಹಾಯಕವಾಗುತ್ತದೆ ಅಂತೆಯೇ ವಾಸ್ತವವನ್ನು ಅರಿತುಕೊಳ್ಳುವ ಕೊಂಚ ಮಾತ್ರದ ತಿಳಿವಳಿಕೆಯು ಸಹಾಯಕವಾಗಿರುತ್ತದೆ.
ಅದೆಷ್ಟೇ ಆಕರ್ಷಕ ಸಂಬಳ ಹಾಗೂ ಹುದ್ದೆಯ ಆಫರ್ ನಿಮಗೆ ದೊರೆತಾಗಲು ಕೂಡ ನೀವು ಮಾನಸಿಕವಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಹೋಗುತ್ತದೆ. ಯಾವುದೋ ಒಂದು ರೀತಿಯ ಹಿಂಜರಿಕೆ ತಡವರಿಕೆಗಳು ನಿಮ್ಮನ್ನು ಕಾಡುತ್ತವೆ… ಅಂತಹ ಸನ್ನೆಗಳನ್ನು ಖಂಡಿತವಾಗಿಯೂ ಪುರಸ್ಕರಿಸಿ.
ನಿಮ್ಮ ಸಮಯ ಅತ್ಯಂತ ಬೆಲೆ ಬಾಳುವಂತಹದ್ದು. ಯಾವುದೇ ಒಂದು ವಿಷಯದ ಕುರಿತು ನೀವು ಯೋಚಿಸುವಾಗ ಬಹಳವೇ ಸಮಯವನ್ನು ತೆಗೆದುಕೊಂಡರೆ ಅದು ನಿಮ್ಮ ಸಮಯದ ಅಪಮೌಲ್ಯ ಮಾಡಿದಂತೆ. ಆದ್ದರಿಂದ ನಿಮ್ಮ ಸಮಯದ ಮೌಲ್ಯವನ್ನು ಅರಿತುಕೊಂಡು ತೀರ್ಮಾನವನ್ನು ಬೇಗನೆ ತೆಗೆದುಕೊಳ್ಳಿ
ನಿಮ್ಮ ನಿರ್ಣಯಾತ್ಮಕ ಶಕ್ತಿಯು ನಿಮ್ಮ ಪ್ರತಿ ಆಯ್ಕೆಯೊಂದಿಗೆ ಹೆಚ್ಚುತ್ತಾ ಹೋಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವು ನಿಮ್ಮನ್ನು ಮತ್ತಷ್ಟು ಬದುಕಿನಲ್ಲಿ ಮೇಲಕ್ಕೆ ಕೊಂಡೊಯ್ಯಬೇಕು.
ನೀವು ಏನನ್ನು ಸೇವಿಸಬೇಕು ಏನನ್ನು ತಡಬೇಕು ಹಾಗೂ ಯಾವ ರೀತಿಯ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಸಂತೋಷವಾಗಿರುತ್ತೀರಿ ಎಂಬುದರ ಕುರಿತು ಅತ್ಯಂತ ತೀವ್ರವಾಗಿ ಯೋಚಿಸಿ ನಿರ್ಣಯವನ್ನು ಕೈಗೊಂಡರೆ ನಿಮ್ಮಲ್ಲಿನ ಆತ್ಮವಿಶ್ವಾಸ ಕೂಡ ಹೆಚ್ಚುತ್ತಾ ಹೋಗುತ್ತದೆ.
ನಿರ್ಣಯ ತೆಗೆದುಕೊಳ್ಳದೆ ಇರುವುದು ನಿಮ್ಮ ಮಾನಸಿಕತೆಯನ್ನು ಕೆಡಿಸುತ್ತದೆ. ಯಾವುದೇ ಒಂದು ನಿರ್ಣಯಕ್ಕೆ ಬರಲಾಗದೆ ಇರುವುದು ಅನಿಶ್ಚಿತತೆಯನ್ನು ತೋರಿದರೆ ನಿರ್ಣಯಿಸಬಾರದು ಎಂಬ ಕಾರಣಕ್ಕೆ ಸುಮ್ಮನಾಗುವುದು ಕೂಡ ಒಂದು ನಿರ್ಣಯವೇ.
ಹೀಗೆ ನಿರ್ಣಯಿಸಿದಾಗ ಪಶ್ಚಾತಾಪ, ಅವಕಾಶವನ್ನು ಕಳೆದುಕೊಂಡ ಭಾವ ಹಾಗೂ ಆತಂಕಗಳು ಖಂಡಿತವಾಗಿಯೂ ಉಂಟಾಗುತ್ತವೆ… ನಿಮ್ಮ ನಿರ್ಣಯಗಳನ್ನು ಕಾರ್ಯರೂಪಕ್ಕೆ ಇಳಿಸಿದರೆ ನಿಮಗೆ ಒಂದು ಸ್ಪಷ್ಟತೆ ದೊರೆಯುತ್ತದೆ.
ಮೇಲಿನ ಎಲ್ಲಾ ಅಂಶಗಳನ್ನು ನೀವು ಅರಿತುಕೊಂಡು ತೀವ್ರವಾದ ನಿರ್ಣಯ ಕೈಗೊಳ್ಳುವ ಮೂಲಕ ನಿಮ್ಮ ಸಮಯದ ಸದುಪಯೋಗ ಯೋಚನಾ ಶಕ್ತಿ ಹಾಗೂ ಆಯ್ಕೆಯ ಗೊಂದಲಗಳನ್ನು ಬಗೆಹರಿಸಿಕೊಳ್ಳಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








