- ಕಬಿನಿ ಭರ್ತಿಗೆ ಇನ್ನೆರಡು ಅಡಿ ಬಾಕಿ
- ಕಆರ್‌ಎಸ್, ಹಾರಂಗಿ, ಹೇಮಾವತಿ ಜಲಾಶಯಗಳಿಗೂ ಭಾರೀ ಒಳಹರಿವು
ಮೈಸೂರು: ರಾಜ್ಯದ ಮಲೆನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಬಿನಿ, ಕೆಆರ್‌ಎಸ್, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಕೆಲ ಜಲಾಶಯಗಳು ಭರ್ತಿಯ ಹಂತದತ್ತ ಸಾಗುತ್ತಿವೆ.
ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ 95.57 ಅಡಿಗೆ ನೀರು ತಲುಪಿದೆ. ಜಲಾಶಯಕ್ಕೆ 20,438 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,768 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,281.43 ಅಡಿಗೆ ತಲುಪಿದೆ. ಜಲಾಶಯಕ್ಕೆ 19,037 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 12,000 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಕಬಿನಿ ಜಲಾಶಯ ಭರ್ತಿಯಾಗಲು ಇನ್ನೂ ಕೆಲವೇ ಅಡಿ ಬಾಕಿ ಉಳಿದಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಈಗಿನ ನೀರಿನ ಮಟ್ಟ 2,857.98 ಅಡಿಗೆ ತಲುಪಿದೆ. ಜಲಾಶಯಕ್ಕೆ 16,880 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 19,700 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,909.09 ಅಡಿಯಾಗಿದೆ. ಜಲಾಶಯಕ್ಕೆ 11,686 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 500 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.ಇದನ್ನು ಓದಿ –ಡ್ಯಾಂ ತುಂಬಿದರೆ ನೀರು ಬಿಡುವುದು ಅನಿವಾರ್ಯ: ಡಿ.ಕೆ. ಶಿವಕುಮಾರ್
ನಿರಂತರ ಮಳೆಯ ಹಿನ್ನೆಲೆಯಲ್ಲಿ ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಅಗತ್ಯಕ್ಕೆ ಅನುಗುಣವಾಗಿ ನೀರು ಹೊರಹರಿಸುವ ಪ್ರಮಾಣದಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಇಲಾಖೆ ಈಗಾಗಲೇ ಸೂಚನೆ ನೀಡಿದೆ.








